fbpx

ಶ್ರೀ ಶಂಕರಾದ್ವೈತ

ಈ ದಿನ ಶ್ರೀ ಶಂಕರ ಜಯಂತಿಯಾದ್ದರಿಂದ ಶ್ರೀ ಶಂಕರರನು ಸ್ಮರಿಸಿ, ಅವರನ್ನು ಸ್ಮರಿಸುವುದು ಮಾತ್ರವಲ್ಲದೆ ಅವರ ತತ್ವ ಚಿಂತನೆಗಳ ಬಗ್ಗೆಯೂ ಗಮನ ಹರಿಸಬೇಕಾದುದು ಬಹಳ ಅವಶ್ಯಕ. ಲೌಕಿಕ ಮತ್ತು ಪರಮಾರ್ಥಗಳ ಪ್ರಭೇದ ಪ್ರಯತ್ನಗಳ ಆಧಾರಿತವಾದ ಸಿದ್ಧಾಂತಕ್ಕೆ ಅದರ ಸ್ಮರಣೆಯೇ ಒಂದು ಸಾರ್ಥಕತೆಯೇ ಹೊರತು ಜಾಲತಾಣಗಳಲ್ಲಿ ನಮ್ಮದೇ ಫೋಟೋಗಳನ್ನು ಇಳೆಬಿಟ್ಟರೆ ಸತ್ಯದರ್ಶನಕ್ಕೆ ಯಾವ ಪ್ರಯೋಜನವೂ ಇಲ್ಲವೆಂದು ತಿಳಿಯಬಹುದಾದ ವಿಷಯ. ಆದ್ದರಿಂದ ಬನ್ನಿ ಕೆಲವು ವಿಷಯಗಳನ್ನು ಇಲ್ಲಿ ದರ್ಷಿಸೋಣ.

ಅದ್ವೈತ ಸಿದ್ಧಾಂತದ ಬಗ್ಗೆ ಸಾಮಾನ್ಯವಾಗಿ ಲಭ್ಯವಿರುವ ಮಾಹಿತಿಗಳು ಮೂಲರೂಪಕ್ಕೆ ಬಹುತೇಕವಾಗಿ ದೂರವಿರಬಹುದು. ಆದ್ದರಿಂದ ಇಲ್ಲಿ ಸತ್ಯಾಸತ್ಯಗಳನ್ನು ಅರಿಯುವ ಪ್ರಯತ್ನಗಳನ್ನು ಮಾಡೋಣ.

೧. ಅದ್ವೈತ: ಮೂಲಾರ್ಥ ಅದ್ವಿತೀಯ ಅಥವಾ ಅವಿಭಾಜ್ಯವಾದದ್ದು

೨. ಮಾಯೆ: ಮಿಥ್ಯ ಅಥವಾ ಕೇವಲ ಜ್ಞಾನದಿಂದ ಮಾತ್ರ ಸತ್ಯರೂಪವನ್ನು ತಿಳಿಯಲ್ಪಟ್ಟು ಅದರ ಮುಕ್ತಿ ಸಾಧ್ಯವಾದದ್ದು

೩. ಬ್ರಹ್ಮನ್: ಪ್ರಪಂಚ ಅಥವಾ ಯಾವುದೆಲ್ಲವೂ ಇರುವುದು ಹಾಗೂ ಇಲ್ಲದಿರಿವುದೂ ಕೂಡ

೪. ಆತ್ಮನ್: ಎಲ್ಲ ಜಡ ಹಾಗೂ ಜೀವಿಗಳಲ್ಲಿರುವ ಮೂಲ ಪರಬ್ರಹ್ಮ ಸ್ವರೂಪ

೫. ಮುಮುಕ್ಷುಃ ಅಥವಾ ಮುಕ್ತಿ: ಪರಬ್ರಹ್ಮ ಸ್ವರೂಪದ ಸಾಕ್ಷಾತ್ಕಾರ.

ವೇದ ಹಾಗು ಉಪನಿಷತ್ತುಗಳಲ್ಲಿ ಮೂಲವಾಗಿ ಉಪದೇಶಿಸಿರುವ ಅದ್ವೈತ ಸಿದ್ಧಾಂತವು ಶ್ರೀ ಶಂಕರರ ಕೈಂಕರ್ಯದಿಂದ ಎಲ್ಲ ಭಾರತೀಯರ ಹಾಗೂ ವಿಶ್ವದಲ್ಲಿ ಆಧ್ಯಾತ್ಮ ಅನ್ವೇಶಿಗಳ ಚಿತ್ತ ಚೈತನ್ಯಗಳಲ್ಲಿ ಇಂದಿಗೂ ಎಂದೆಂದಿಗೂ ಪ್ರಬಲಿತವಾಗಿ ಪ್ರಜ್ವಲಿಸುತ್ತದೆ.

ದ್ವೈತವೆಂದರೆ ಮೂಲವಾಗಿ ಎರಡು ಭಾಗಗಳಾಗಿ ವಿಭಜನೆ. ಇದೊಂದು ದ್ವೈತ ಪ್ರಪಂಚ. ಅಂದರೆ ಎಲ್ಲವೂ, ಎಲ್ಲರೂ ದ್ವೈತಾನುಭವಗಳಲ್ಲಿ ಅಡಗಿ ತೊಡಗಿರುವುದು ಎಂದು. ಎಲ್ಲದಕ್ಕೂ ದ್ವಿರೂಪ ವೈರುಧ್ಯ ಇರುವುದು. ಉದಾಹರಣೆಗೆ ಬೆಳಕು ಕತ್ತಲು, ಒಳ್ಳೆಯದು ಕೆಟ್ಟದ್ದು, ಸತ್ಯ ಅಸತ್ಯ, ಹೀಗಾಗಿ. ಈ ವೈರುಧ್ಯಗಳು ಎಂದಿಗೂ ಎಲ್ಲರನ್ನೂ ಇನ್ನೂ ಆಳಕ್ಕೆ ಕರೆದುಕೊಂಡು ಹೋಗುತ್ತವೆಯೇ ಹೊರತು ಇವಕ್ಕೆ ಕೊನೆಯೆಂಬುದಿಲ್ಲ, ಇದನ್ನೇ ಮಾಯೆಯಂದು ಕರೆಯುವುದು. ಇದರಿಂದ ಮುಕ್ತಿ ಕೇವಲ ಅದ್ವೈತ ಜ್ಞಾನದಿಂದ ಉಂಟಾಗುವ ಪರಬ್ರಹ್ಮ ಸ್ವರೂಪದ ಸಾಕ್ಷಾತ್ಕಾರ. ಅಂದರೆ ಜ್ಞಾನ ಮಾರ್ಗದಿಂದ ಮೂಲ ಸ್ವರೂಪದ ಅರಿವು. ಇದನ್ನು ಅರಿಯುವ ಅವಶ್ಯಕತೆ ನಮಗೆ ಸ್ವಾನುಭವದ ಮೂಲಕವೇ ಬರಬೇಕು ಹೊರತು ಯಾರ ಅಥವಾ ಯಾವ ಬಾಹಿರ ಒತ್ತಡದಿಂದಲ್ಲ. ಹೀಗೆ ಪರಮ ಸತ್ಯಾನ್ವೇಷಣೆಯ ಗೀಳು ಯಾರ ಮನಸಿನಲ್ಲಾದರು ಮೂಡಿದೆಯೆಂದರೆ ಅದು ಪುಣ್ಯಕಾರ್ಯಗಳ ಫಲ ಮಾತ್ರವೆಂದು ಶ್ರೀ ಶಂಕರರು ಮಾಣಿಕ್ಯದಂತೆ ಪ್ರಜ್ವಲಿಸುವ ಅವರ ವಿರಚಿತ ವಿವೇಕಚೂಡಾಮಣಿಯ ಮೊದಲ ಸಾಲುಗಳಲ್ಲೆ ವಿಶ್ಲೇಷಿಸಿದ್ದಾರೆ. ಶ್ರೀ ಶಂಕರ ವಿರಚಿತ ಶ್ರೀ ಲಕ್ಷ್ಮೀನರಸಿಂಹ ಕರಾವಲಂಭ ಸ್ತೋತ್ರ ನಾನು ನಿತ್ಯ ಪಠಿಸುವ ಸ್ತೊತ್ರಗಳಲ್ಲಿ ಒಂದು. ಸೌಂದರ್ಯಲಹರಿ, ಆತ್ಮಬೋಧ, ಉಪನಿಷತ್ತುಗಳ ಭಾಷ್ಯ ಹೀಗೆ ಶ್ರೀ ಶಂಕರ ವಿರಚಿತ ನೂರಾರು ರಚನೆಗಳು ಈ ಸತ್ಯಾನ್ವೇಷಣೆಗಳಿಗೆ ಮಾರ್ಗದರ್ಶನ.

ಶ್ರೀ ಶಂಕರಾದ್ವೈತದ ಕೆಲವು ಜನಪ್ರಿಯ ಸುಭಾಷಿತಗಳು:

ಅಹಂ ಬ್ರಹ್ಮಾಸ್ಮಿ: ನಾನು ಆ ಪರಬ್ರಹ್ಮ ಸ್ವರೂಪ, ಆ ಪರಬ್ರಹ್ಮ ಸ್ವರೂಪ ನನ್ನಲ್ಲಿಯೂ ಇದೆ ಎಂದು.

ತತ್ ತ್ವಂ ಅಸಿ: ಅದು ನೀನು, ಅದು ಎಂದರೆ ಇಲ್ಲಿ ಆ ಪರಬ್ರಹ್ಮ ಸ್ವರೂಪ ನೀನು, ಅದು ನಿನ್ನಲ್ಲಿಯೇ ಇದೆ ಎಂದು.

ಹೀಗಾಗಿ ಈ ಪಾವನ ದಿನದಂದು ಎಲ್ಲರಿಗೂ ಪಾರಮಾರ್ಥಿಕ ಅಧ್ಯಯನಕ್ಕೆ ಒಂದು ಪ್ರೇರಣೆ ಯಾಗಲಿ, ಎಲ್ಲರೂ ಉನ್ನತಿಯನ್ನು ಕಾಣಲಿ, ಶ್ರೀ ಶಂಕರರ ಅನುಗ್ರಹದಿಂದ ಎಲ್ಲರೂ ಸತ್ಪಥದೆಡೆಗೆ ನಡೆಯೋಣ.

ಓಂ ತತ್ ಸತ್

#ShankaraJayanthi #ಅದ್ವೈತ #advaitavedanta #advaita #ಶಂಕರಜಯಂತಿ

(Originally published on 17 May 2021)

Scroll Up
error: Content is protected !!