ಅರಿಮೆಗೆ ಮೀರಿದ ವಿಸ್ಮಯ
ಹಿಂದೆ ಲೆಕ್ಕವಿರದಷ್ಟವರಿದ್ದರು
ಮುಂದೆಯೂ..
ಆಗಾಗ್ಗೆ ಅವರವರಿಗೆ
ಅವರವರದು ಸರಿಯೆನಿಸುವುದು
ಎಲ್ಲಿ ಹೋಗಿ ಮುಟ್ಟುವುದಿದು?
ಇವಕ್ಕೆಲ್ಲಾ ಮೊದಲೊಂದಿತ್ತೆ?
ಕೆಲ ಎಳೆಗಳು
ಮತ್ತೆಮತ್ತೆ ಮೊದಲೆನಿಸಿದರೂ
ಮರೆಮರೆತು ಮೆರೆದರೂ
ಮರಳಿ ಮರುಕಳಿಸುವ
ಮರುಳು ಮಾಯೆಯೇ
ಮೋಹಕ್ಕಿಹ ಮಿತಮಾರ್ಗ
ಅರಿಮೆಯ ಗಟ್ಟಿನೆಲದಿಂ
ಗಗನಚುಂಬನಕ್ಕೆಗರಿ
ಹಾರಿ ಹರಿದಾಡಲು
ಹಂಬಲಿಸುವ ಮನಕೆ
ಮೋಹದ ಅಂಬುಲಿಯೇ
ಹಿತಮದ್ದಾಗುವುದೆ?
ಅರಿಮೆಯಾನಿಸಿಕೆ ಅತಿಯಾದರೆ
ಮನ ಮತಿಗೆಡುವುದೆ?
ಹಾಗಾದರೆ ಮೋಹವೂ
ಮತಿಯ ಸುಸ್ಥಿತಿಗಿರುವ
ಮಿತಿಯೆಂದೆನಬಹುದೆ?
ಕೆಲವೊಮ್ಮೆ ಅನಿಸುವುದು
ಇವೆಲ್ಲಾಲೋಚನೆಗಳಲಿ
ಸದುಪಯೋಗವೇನಾದರಿರುವವೆಯೇ?
ಉಪಯೋಗಗಳನ್ನುಡುಕುವ
ಮನಕ್ಕೇನು ಶ್ರೇಯಾ?
ಇರುವುದನ್ನಿರುವಹಾಗೆ
ಗ್ರಹಿಸಲೇಕೆ ಹಿಂಜರಿತ
ರಭಸದಿಂ ಹರಿತದಲಿ
ನಿಂತು ನೋಡಲು
ಬೇಡವೇ ಒಂದು
ಲೆಕ್ಕಿಸದ ಸೆಳೆತ
ಇಷ್ಟರಲಿ ಕೆಲಕ್ಷಣದ
ಕಾಲಗಣನೆಯ ಕಾಲ್ನಡಿಗೆ
ಕೂಡಿ ಕಳೆದ ಕಾರ್ಯವು
ಆಗಲೇ ಇತಿಹಾಸಕ್ಕೊಕ್ಕಿದೆ
ಇದೇ ಎಂದೂ ಈ ಅರಿಮೆಗೆ
ಮೀರುವ ವಿಸ್ಮಯ
ನರೇಂದ್ರ ಕುಮಾರ್ ಜೆ
೧೭.೦೮.೨೦
2020